ಫ್ಲೋರಿ, ಸರ್ ಹೊವಾರ್ಡ್ ವಾಲ್ಟರ್
1898-1968. ಆಸ್ಟ್ರೇಲಿಯನ್ ಇಂಗ್ಲಿಷ್ ರೋಗನಿದಾನ ತಜ್ಞ. ಪೆನಿಸಿಲಿನ್ನಿನ ಅವಿಷ್ಕಾರ ಮತ್ತು ಬಳಕೆಗಳ ವ್ಯಾಸಂಗಕ್ಕಾಗಿ 1945ರಲ್ಲಿ ಚೆಯ್ನ್ ಮತ್ತು ಫ್ಲೆಮಿಂಗ್ ಇವರ ಜೊತೆ ನೊಬೆಲ್ ಪಾರಿತೋಷಿಕ ಪಡೆದ ವಿಜಯಿ. ಅಡಿಲೇಡಿನ ಪಾದರಕ್ಷಾವ್ಯಾಪಾರಿ ಜೋಸೆಫ್ ಫ್ಲೋರಿ ಮತ್ತು ಬರ್ಥ ಮೇರಿ ಇವರ ಮೂರು ಮಕ್ಕಳು ಪೈಕಿ ಒಬ್ಬನೇ ಹಾಗೂ ಕಿರಿಯ ಮಗನಾಗಿ 1898 ಸೆಪ್ಟೆಂಬರ್ 24ರಂದು ಜನನ. ಸಂಸಾರ ತಕ್ಕ ಮಟ್ಟಿಗೆ ಅನುಕೂಲಸ್ಥಿತಿಯಲ್ಲಿದ್ದುದರಿಂದ ಅಡಿಲೇಡಿನಲ್ಲಿ ಉನ್ನತ ಮಟ್ಟದ್ದೆನಿಸಿದ ಸೆಂಟ್ ಪೀಟರ್ಸ್ ಕಾಲೇಜಿಯೇಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ. ಪ್ರತಿಭಾವಂತ ವಿದ್ಯಾರ್ಥಿ ಎನ್ನಿಸಿಕೊಂಡು ವೈದ್ಯವ್ಯಾಸಂಗ ಮಾಡಬೇಕೆಂದು ನಿರ್ಧರಿಸಿ ಅಡಿಲೇಡಿನ ವೈದ್ಯಕೀಯ ಶಾಲೆಯನ್ನು 1917ರಲ್ಲಿ ಸೇರಿ ಉತ್ತಮ ದರ್ಜೆಯಲ್ಲಿ ಎಂ.ಬಿ.ಬಿ.ಎಸ್. ಪದವಿ ಗಳಿಸಿ (1922) ಪ್ರತಿಷ್ಠಿತ ರೊಹೀಡ್ಸ್ ವಿದ್ಯಾರ್ಥಿವೇತನ ಪಡೆದು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿನ ಅಕ್ಸ್‍ಫರ್ಡಿಗೆ ತೆರಳಿದ. ಅಲ್ಲಿ ಪ್ರಸಿದ್ಧ ನರಮಂಡಲ ಶಾಸ್ತ್ರಜ್ಞ ಸರ್ ಚಾರಲ್ಸ್ ಶೆರ್ರಿಂಗ್ಟನ್ನನ ಕೈಕೆಳಗೆ ದೇಹಕಾರ್ಯ ವಿಜ್ಞಾನದಲ್ಲಿ ಪ್ರೌಢ ಅಧ್ಯಯನ ಮಾಡಿದ. ವೈದ್ಯಜ್ಞಾನಕ್ಕೂ ರೋಗನಿದಾನ ವಿಜ್ಞಾನಕ್ಕೂ ದೇಹಕಾರ್ಯ ವಿಜ್ಞಾನದ ಬಲವಾದ ತಳಹದಿ ಇರಲೇಬೇಕೆಂಬುದು ಗುರುವಿನ ಪ್ರಭಾವದಿಂದ ಇವನಿಗೆ ಮನವರಿಕೆ ಆಗಿ, ಮುಂದೆ ತಾನೇ ಗುರುಪಟ್ಟಕ್ಕೆ ಏರಿದಾಗ ತನ್ನ ಕೈಕೆಳಗೆ ಅಭ್ಯಸಿಸುವ ಪ್ರತಿಭಾವಂತ ವಿದ್ಯಾರ್ಥಿಗಳು ದೇಹಕಾರ್ಯವಿಜ್ಞಾನದಲ್ಲಿ ಚೆನ್ನಾಗಿ ತರಬೇತಿ ಹೊಂದಿರಲೇಬೇಕೆಂದು ವಿಧಿಸಿದ. ಆಕ್ಸ್‍ಫರ್ಡಿನ ವ್ಯಾಸಂಗ ಮುಗಿದ ಬಳಿಕ ಒಂದು ವರ್ಷ ಕೇಂಬ್ರಿಡ್ಜಿನಲ್ಲಿ ವ್ಯಾಸಂಗಿಸುತ್ತಿದ್ದು ಅಲ್ಲಿ ರಾಕ್‍ಫೆಲ್ಲರ್ ವಿದ್ಯಾರ್ಥಿವೇತನ ಗಳಿಸಿ ಒಂದು ವರ್ಷ ಅಮೆರಿಕ ವೈದ್ಯ ವಿದ್ಯಾಲಯಗಳಲ್ಲಿ ತರಬೇತಿ ಪಡೆದು ಕೇಂಬ್ರಿಡ್ಜಿಗೆ ವಾಪಸಾಗಿ ಅಲ್ಲಿ ಪಿಎಚ್.ಡಿ. ಡಿಗ್ರಿ ಪಡೆದ. ಆಕ್ಸ್‍ಫರ್ಡಿನಲ್ಲಿದ್ದಾಗ ಶೆರ್ರಿಗ್ಟನ್ನಿನಿಂದ ಪ್ರಭಾವಿತನಾದಂತೆಯೇ ಫ್ಲೋರಿ ಕೇಂಬ್ರಿಡ್ಜಿನಲ್ಲಿ ಗೌಲ್ಯಾಂಡ್ ಹಾಪ್‍ಕಿನ್ಸನಿಂದ ಪ್ರಭಾವಿತನಾಗಿ ಶಾಸ್ತ್ರಕ್ಕೆ ಜೀವರಸಾಯನವಿಜ್ಞಾನ ಅಧಾರವೆಂಬುದನ್ನು ಗ್ರಹಿಸಿದ.

	1931ರಲ್ಲಿ ಫ್ಲೋರಿ ಶೆಫೀಲ್ಡಿನಲ್ಲಿ ರೋಗನಿದಾನ ವಿಭಾಗದಲ್ಲಿ ಹಂಟರ್ ಸ್ಮಾರಕ ಪ್ರಾಧ್ಯಾಪಕ ಹುದ್ದೆ ಪಡೆದ. ಅ ಸಂಸ್ಥೆಯ ಕ್ವೀನ್ಸ್ ಕಾಲೇಜಿನ ಪ್ರೊವೊ ಆಗಿ ಕೆಲಸ ಮಾಡುವುದಕ್ಕಾಗಿ ರೋಗನಿದಾನ ಸಂಸ್ಥೆಗೆ ರಾಜೀನಾಮೆ ಕೊಟ್ಟ. ಮುಂದೆ ಇವನಿಗೆ ನೊಬೆಲ್ ಪಾರಿತೋಷಿಕ ಗಳಿಸಿಕೊಟ್ಟ ವ್ಯಾಸಂಗಗಳನ್ನು ಈತ ಕೈಗೊಂಡದ್ದು ಈ ಸಂಸ್ಥೆಯಲ್ಲಿಯೇ. ಇಡೀ ಸಂಸ್ಥೆಯ ಲವಲವಿಕೆಯ ಚಟುವಟಿಕೆಗಳಿಗೆ ಕಾರಣೀಭೂತನಾಗಿದ್ದು ಅನೇಕ ವ್ಯಾಸಂಗನಿಷ್ಠ ಶಿಷ್ಯರುಗಳ ನೇತಾರನಾಗಿ ಸಂಸ್ಥೆ ಇವನೇ ಯೂರೊಪಿನಲ್ಲೆಲ್ಲ ಪ್ರಸಿದ್ದವಾಗುವಂತೆಯೂ ಅನೇಕ ಕಡೆಗಳಿಂದ ವಿಜ್ಞಾನಿಗಳು ಇಲ್ಲಿಗೆ ವ್ಯಾಸಂಗಿಸಲು ಬರುವಂತೆಯೂ ಮಾಡಿದ. ಅವರೆಲ್ಲರೂ ಈತನ ಆದೇಶದಂತೆಯೇ ಕೆಲಸ ಮಾಡುತ್ತಿದ್ದುದರಿಂದ ಒಂದು ಯೋಜನೆಯ ಪ್ರಕಾರ ವ್ಯಾಸಂಗ ವಿಭಾಗಗಳನ್ನು ಬೇರೆಬೇರೆಯವರಿಗೆ ಹಂಚಿಕೊಟ್ಟು ಒಟ್ಟು ಫಲಿತಾಂಶ ದೊರೆಯುವಂತೆ ಏರ್ಪಡಿಸಿದ. ವೈದ್ಯಕೀಯ ಸಂಶೋಧನೆಗಳಲ್ಲಿ ಇಂಥ ಸ್ತೋಮವ್ಯಾಸಂಗ (ಟೀಮ್‍ಸ್ಟಡಿ) ಪ್ರಾರಂಭವಾದದ್ದು ಇದೇ ಮೊದಲು. ಸಂಶೋಧನೆಗೆ ಸ್ತೋಮವ್ಯಾಸಂಗ ತಕ್ಕ ಮಾರ್ಗವಲ್ಲ, ಸಂಶೋಧಕನ ವ್ಯಕ್ತಿತ್ವ ಪ್ರತಿಭೆಗಳಿಗೆ ಅದು ಅಡ್ಡಿಯಾಗಿದ್ದು ಘನವಾದ ಮೂಲಭೂತ ಸಂಶೋಧನೆಗಳು ಸಾಧ್ಯವಾಗುವುದಿಲ್ಲ ಎಂದು ಫ್ಲೆಮಿಂಗನೂ ಸೇರಿದಂತೆ ಅನೇಕ ಸಂಶೋಧಕರ ಅಭಿಪ್ರಾಯವಾಗಿದ್ದು ಬಲುವೇಳೆ ಅದು ನಿಜವಾಗಿದ್ದರೂ ಪೆನಿಸಿಲಿನ್ನಿನ ವಿಚಾರದಲ್ಲಿಯಂತೂ ಸ್ತೋಮವ್ಯಾಸಂಗದಿಂದ ಮಾತ್ರವೇ ಫಲ ಸಿದ್ಧಿಸಿದ್ದು ನಿಜ. ಇದನ್ನು ಫ್ಲೆಮಿಂಗ್ ಸಹ ಒಪ್ಪಿಕೊಂಡದ್ದುಂಟು.

	ರೂಢಿಯಾಗಿದ್ದಂತೆ ರೋಗಗಳಲ್ಲಿ ಅಂಗರಚನಾ ವ್ಯತ್ಯಾಸವೇ ಪ್ರಧಾನ ಎಂದು ಗಣಿಸುವುದನ್ನು ಬಿಟ್ಟು ಅಂಗಗಳ ಕಾರ್ಯಕ್ರಮಗಳಲ್ಲಿ ಉಂಟಾಗುವ ಏರುಪೇರುಗಳನ್ನು ಗಮನಿಸುವುದು ಮುಖ್ಯ ಎಂಬ ನಿಲವಿಗೆ ಬಲವಾದ ತಳಹದಿ ಹಾಕಿದವಫ್ಲೋರಿ. ಇದಕ್ಕೆ ಶೆರ್ರಿಂಗ್ಟನ್ನನ ಪ್ರಭಾವವೇ ಕಾರಣವೆಂದು ತೋರುತ್ತದೆ. ರೋಗಗಳಲ್ಲಿ ದೇಹಕಾರ್ಯ ವ್ಯತ್ಯಾಸಗಳ ವ್ಯಾಸಂಗಕ್ಕೆ ತಕ್ಕದ್ದೆಂದರೆ ಪ್ರಾಯೋಗಿಕ ಮಾರ್ಗ. ಕೆಲಸಕ್ಕೆ ಸೇರಿದಾಗಿನಿಂದಲೂ ಫ್ಲೋರಿ ತನ್ನ ವ್ಯಾಸಂಗಗಳಿಗೆ ಈ ಮಾರ್ಗವನ್ನೇ ಅನುಸರಿಸುತ್ತಿದ್ದ. ಅತಿ ಸಾಮಾನ್ಯ ರೋಗಸ್ಥಿತಿಗಳಾದ ಸಾಮಾನ್ಯ ಉರಿಯೂತ, ಅನ್ನ ಹಾಗೂ ಶ್ವಾಸ ಮಾರ್ಗಗಳ ಉರಿಯೂತದಲ್ಲಿ ಲೋಳೆಸುರಿತ ಇತ್ಯಾದಿಗಳನ್ನು ಈ ಮಾರ್ಗರೀತ್ಯ ಅರಿಯಲು ಪ್ರಯತ್ನಿಸಿದ. ಲೋಳೆಪೊರೆಯಲ್ಲಿ ಸ್ವಾಭಾವಿಕವಾಗಿಯೇ ಇರುವ ಏಕಾಣುನಿರೋಧಕವಸ್ತು ಲೈಸೊಸೈಮ್ ಕಡೆಗೆ ಶೀಘ್ರದಲ್ಲೇ ಇವನ ದೃಷ್ಟಿ ಹರಿಯಿತು. ಈ ವಸ್ತುವನ್ನು ಹಲವು ವರ್ಷಗಳ ಹಿಂದೆಯೇ ಫ್ಲೆಮಿಂಗ್ ಆವಿಷ್ಕರಿಸಿದ್ದ. ಫ್ಲೋರಿ ಇದನ್ನು ಶುದ್ಧಗೊಳಿಸಿ ಅದು ಯಾವ ಏಕಾಣುಗಳ ಮೇಲೆ ವರ್ತಿಸುತ್ತದೆ ಎಂಬುದನ್ನು ವಿಶದಪಡಿಸಿದ. ನೈಸರ್ಗಿಕವಾಗಿ ಇರುವ ಏಕಾಣುನಿರೋಧಕ ವಸ್ತುಗಳನ್ನೆಲ್ಲ ಪ್ರಾಯೋಗಿಕವಾಗಿ ವ್ಯಾಸಂಗಿಸಬೇಕೆಂಬ ಕುತೂಹಲದಿಂದ ಅಂಥ ವಸ್ತುಗಳ ಪಟ್ಟಿ ಮಾಡಿದಾಗ ಅವುಗಳಲ್ಲೆಲ್ಲ ಪೆನಿಸಿಲಿನ್ ಅದ್ಭುತ ರೀತಿಯ ಪ್ರತಿಜೈವಿಕ ಎನ್ನುವ ಸಂಗತಿ ಅವನಿಗೆ ಮನವರಿಕೆ ಅಯಿತು. ಮಿಕ್ಕ ವ್ಯಾಸಂಗಗಳನ್ನು ಬಿಟ್ಟು ಪ್ರಯೋಗಾಲಯದ ಜನ ಧನ ಅನುಕೂಲಗಳನ್ನೆಲ್ಲ ಪೆನಿಸಿಲಿನ್ನಿನ ವ್ಯಾಸಂಗಕ್ಕೆ ಮೀಸಲಾಗಿಟ್ಟ.

	ವಿಜ್ಞಾನಿಗಳಿಗೆ ಪ್ರತಿಜೈವಿಕತೆ (ಅ್ಯಂಟಿಬಯೊಸಿಸ್) ಹೊಸಸಂಗತಿ ಏನೂ ಆಗಿರಲಿಲ್ಲ. ಪೆನಿಸಿಲಿನ್ ಕೂಡ ಅಷ್ಟೆ. ಪ್ರಯೋಗಾಲಯದಲ್ಲಿ ನೆರಡಿರೋಗಾಣುಗಳನ್ನು ಕೃಷಿ ಮಾಡುವುದಕ್ಕೆ ವಾತಾವರಣದಲ್ಲಿ ಸಹಜವಾಗಿ ಇರುವ ಏಕಾಣುಗಳು ಪ್ರತಿಬಂಧಕ ಎನ್ನುವುದನ್ನು ಲೂಯಿ ಪಾಸ್ತರ್ 70-80 ವರ್ಷಗಳ ಹಿಂದೆಯೇ ತೋರಿಸಿದ್ದ. ಇದೇ ರೀತಿ ಒಂದು ಸೂಕ್ಷ್ಮಜೀವಿ ಇನ್ನೊಂದು ಸೂಕ್ಷ್ಮಜೀವಿಗೆ ಮೂಲ ಎಂದು ಇನ್ನೂ ಕೆಲವು ಸಂದರ್ಭಗಳಲ್ಲಿ ತಿಳಿದು ಬಂದಿತ್ತು. ಸುಮಾರು ಹತ್ತು ವರ್ಷಗಳ ಹಿಂದೆ ಪೆನಿಸಿಲಿನ್ನನ್ನು ಫ್ಲೆಮ್ಮಿಂಗ್ ಅವಿಷ್ಕರಿಸಿ ಅದನ್ನು ಪ್ರಬಲವಾದ ಒಂದು ಸ್ಥಳೀಯ ಏಕಾಣುನಿರೋಧಕವಾಗಿ ಬಳಸಬಹುದೆಂದು ತಿಳಿಯಪಡಿಸಿದ್ದ. ಆದರೆ ಫ್ಲೋರಿ ಮತ್ತು ಆತನ ಆಕ್ಸ್‍ಫರ್ಡ್ ಗೆಳೆಯರು, ಪೆನಿಸಿಲಿನ್ ಒಂದು ಪ್ರಬಲ ಅಂತರ್ದೈಹಿಕ ಔಷಧವೂ (ಸಿಸ್ಟಮಿಕ್ ಮೆಡಿಸಿನ್) ಆಗಿದ್ದು ಏಕಾಣುಕೃತ ದೈಹಿಕರೋಗಗಳಿಗೆ ಒಳ್ಳೆಯ ಮದ್ದಾಗಿರುವ ವಿಷಯವನ್ನು ಹೊರಗೆಡವಿದರು. ವಾಸ್ತವವಾಗಿ ಇದರಿಂದ ಅನೇಕಾನೇಕ ಪ್ರತಿಜೈವಿಕಗಳ ಅವಿಷ್ಕಾರವಾದುದಲ್ಲದೆ ಪ್ರತಿಜೈವಿಕಗಳ ತಯಾರಿಕೆಯ ಪ್ರತ್ಯೇಕ ಕೈಗಾರಿಕೆಯೇ ಪ್ರಾರಂಭವಾಯಿತು.

ಪೆನಿಸಿಲಿನ್ನಿನ ವ್ಯಾಸಂಗವನ್ನು ಬೃಹದ್ರೀತಿಯಲ್ಲಿ ಕೈಗೊಳ್ಳಲು ಫ್ಲೋರಿಗೆ ಅಮೆರಿಕದ ರಾಕ್‍ಫೆಲ್ಲರ್ ಸಂಸ್ಥೆಯಿಂದ 1939ರಲ್ಲಿ ಧನಸಹಾಯ ದೊರೆಯಿತು. ಕೃಷಿ ಮಾಧ್ಯಮದಿಂದ ಪೆನಿಸಿಲಿನ್ನನ್ನು ಪ್ರತ್ಯೇಕಿಸಲು ಬಬ್ಬ ಜೀವರಸಾಯನ ವಿಜ್ಞಾನಿಯ ಸಹಾಯ ಬೇಕಾಗಿತ್ತು. ತಕ್ಕ ವ್ಯಕ್ತಿಯನ್ನು ಅರಸುತ್ತ ಗುರು ಹಾಪ್‍ಕಿನ್ಸ್‍ನನ್ನು ವಿಚಾರಿಸಿದಾಗ ಆ ತರುಣದಲ್ಲಿ ಹಿಟ್ಲರನ ನಾಟ್ಸಿ ಜರ್ಮನಿಯಿಂದ ಓಡಿಬಂದು ಇಂಗ್ಲೆಂಡಿನಲ್ಲಿ ತನ್ನ ಪ್ರಯೋಗಾಲಯದಲ್ಲಿ ಕೆಲಸಮಾಡುತ್ತಿದ್ದ ಚೆಯ್ನ್ ಎಂಬ ವಿಜ್ಷಾನಿಯನ್ನು ಆತ ಸೂಚಿಸಿದ. ಇದು ಒಳ್ಳೆಯ ಆಯ್ಕೆಯೇ ಆಯಿತು. ಫ್ಲೆಮ್ಮಿಂಗನಿಗಾಗಿ ಹತ್ತುವರ್ಷಗಳ ಹಿಂದೆ ಕೃಷಿಮಾಧ್ಯಮದಿಂದ ಪೆನಿಸಿಲಿನ್ನನ್ನು ಶುದ್ದವಾಗಿ ಬೇರ್ಪಡಿಸಲು ಹೆರಾಲ್ಡ್ ರೈಸ್ಟ್ರಿಕ್ ಎಂಬ ಪ್ರಸಿದ್ದ ರಸಾಯನ ವಿಜ್ಞಾನಿಗೆ ಕೂಡ ಅಸಾಧ್ಯವಾಗಿದ್ದುದನ್ನು ಚೆಯ್ನ್ ಶೀಘ್ರದಲ್ಲಿ ಸಾಧಿಸಿ ಶುದ್ಧ ಪೆನಿಸಿಲಿನ್ನನ್ನು ಬೇರ್ಪಡಿಸಿದ. ಪ್ರಯೋಗ ಪ್ರಮಾಣದಲ್ಲಿ ಇದನ್ನು ಪಡೆಯಲು ಸರ್ವಸಾಮಥ್ರ್ಯವನ್ನೂ ಬಳಸಿಕೊಂಡು 1941ರಲ್ಲಿ ಒಂಬತ್ತು ಜನ ರೋಗಿಗಳ ಚಿಕಿತ್ಸೆಗೆ ಸಾಕಾಗುವಷ್ಟು ಪೆನಿಸಿಲಿನ್ನನ್ನು ಪಡೆದುದಾಯಿತು. ರೋಗಿಗಳಿಗೆ ಚುಚ್ಚುಮದ್ದಾಗಿ ಅದನ್ನು ಕೊಟ್ಟಾಗ ಅತ್ಯಾಶ್ಚ್ಜರ್ಯಕರ ಗುಣ ಕಂಡುಬಂತು. ಪೆನಿಸಿಲಿನ್ನನ್ನು ಅಗಾಧಪ್ರಮಾಣದಲ್ಲಿ ತಯಾರಿಸುವುದು ಅಗತ್ಯ ಎನ್ನಿಸಿತು.

ಆಗ ಇಂಗ್ಲೆಂಡ್ ಜರ್ಮನಿಯೊಡನೆ ಯುದ್ಧಮಾಡುತ್ತ ಜರ್ಝರಿತವಾಗಿ ಹೋಗಿತ್ತು. ಕೈಗಾರಿಕಾ ಪ್ರಮಾಣದಲ್ಲಿ ಪೆನಿಸಿಲಿನ್ನನ್ನು ಇಂಗ್ಲೆಂಡಿನಲ್ಲಿ ತಯಾರಿಸಲು ಜನ, ಧನ ಸ್ಥಳಾನುಕೂಲತೆ ಏನೂ ಇರಲಿಲ್ಲ. ಅದ್ದರಿಂದ ಫ್ಲೋರಿ ಅಮೆರಿಕದಲ್ಲಿ ಸಹಾಯ ಕೋರುವುದಕ್ಕಾಗಿ ಅಲ್ಲಿಗೆ ನಾರ್ಮನ್ ಹೀಟ್ಲಿ ಎಂಬ ಇನ್ನೊಬ್ಬ ವಿಜ್ಞಾನಿಯೊಡನೆ ತೆರಳಿದ. ಅಮೆರಿಕ ಆಗ ಇನ್ನೂ ಯುದ್ಧಕ್ಕೆ ಕಾಲಿಟ್ಟಿರಲಿಲ್ಲ. ಬೃಹತ್ ಕೈಗಾರಿಕೆಗಳ ತವರಾದ ಆ ಐಶ್ವರ್ಯವಂತ ಸೀಮೆಯಲ್ಲಿ ಫ್ಲೋರಿ ಧನ ಸಹಾಯ ನಿರೀಕ್ಷಿಸಿದ್ದು ನ್ಯಾಯವಾಗಿಯೇ ಇತ್ತು. ಅಲ್ಲದೆ ಹಿಂದೆ ರಾಕ್‍ಫೆಲ್ಲರ್ ವಿದ್ಯಾರ್ಥಿಯಾಗಿ ಆತ ಅಮೆರಿಕಕ್ಕೆ ಹೋಗಿದ್ದಾಗ ಆತನ ಸಹವಿದ್ಯಾರ್ಥಿಯಾಗಿದ್ದ ಎ.ಎನ್. ರಿಚಡ್ರ್ಸ್ ಎಂಬಾತ ಈಗ ಅಮೆರಿಕ ಸರ್ಕಾರದಲ್ಲಿ ವೈದ್ಯ ಸಂಶೋಧನೆಗಳಿಗೆ ಸಂಬಂಧಪಟ್ಟ ಅಧಿಕಾರಿ ಆಗಿದ್ದು ಈತನ ಸಹಾನುಭೂತಿ ಸಹಾಯ ಫ್ಲೋರಿಗೆ ದೊರೆತವು. ಇದರಿಂದ ಅಮೆರಿಕದಲ್ಲಿ ಆತ ಪೆನಿಸಿಲಿನ್ ತಯಾರಿಕೆಯ ಬೃಹದ್ಯಂತ್ರಗಳನ್ನು ಸ್ಥಾಪಿಸಿ ಅಧಿಕ ಪ್ರಮಾಣದಲ್ಲಿ ಅದನ್ನು ತಯಾರಿಸುವುದು ಸಾಧ್ಯವಾಯಿತು. ಏಕಾಣುಕೃತರೋಗಗಳಿಗೆ ಪೆನಿಸಿಲಿನ್ ಅತ್ಯುತ್ತಮ ಔಷಧವೆಂದು ಲೋಕಕ್ಕೇ ವಿಶದವಾಯಿತು. ಈ ಕಾರಣಗಳಿಗಾಗಿಯೇ ಫ್ಲೋರಿ ಮತ್ತು ಚೆಯ್ನ್ ಇವರಿಗೆ ನೊಬೆಲ್ ಪಾರಿತೋಷಿಕ ಕೊಡಬೇಕೆಂದು ನಿರ್ಧರಿಸಿದರು. ಆದರೆ ಪೆನಿಸಿಲಿನ್ನಿನ ಆವಿಷ್ಕಾರ ಮಾಡಿ ಅದರ ಗುಣ ಉಪಯೋಗಗಳನ್ನು ಸುಮಾರು 15 ವರ್ಷಗಳ ಹಿಂದೆಯೇ ಪ್ರಕಟಿಸಿದ್ದ ಫ್ಲೆಮಿಂಗನನ್ನು ಫ್ಲೋರಿ ಮರಯಲಿಲ್ಲ. ಪಾರಿತೋಷಿಕ ಸಮಿತಿಯೂ ಮರೆಯಲಿಲ್ಲ. ಹೀಗಾಗಿ ಪಾರಿತೋಷಿಕವನ್ನು ಮೂವರಿಗೂ ಹಂಚಲಾಯಿತು (1945). ಪೆನಿಸಿಲಿನ್ನಿನ ಬಳಕೆಯ ಮೇಲ್ವಿಚಾರಣೆಗಾಗಿ ಫ್ಲೋರಿ 1943ರಲ್ಲಿ ಆಫ್ರಿಕ ಯುದ್ಧರಂಗಕ್ಕೆ ಹೋಗಿದ್ದ. ಅಂಥ ಕೆಲಸಕ್ಕಾಗಿಯೇ 1943-44ರಲ್ಲಿ ಮಾಸ್ಕೋವಿಗೆ ತೆರಳಿದ ಆಂಗ್ಲ ಅಮೆರಿಕ ನಿಯೋಗದ ಸದಸ್ಯನಾಗಿ ಫ್ಲೋರಿ ಇದ್ದದ್ದೂ ಉಂಟು.

1922ರಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಬಂದು ಅನಂತರ ಅಲ್ಲಿಯೇ ನೆಲಸಿ ನಾಲ್ಕು ದಶಕಗಳಿಗೂ ಮೀರಿ ಆಕ್ಸ್‍ಫರ್ಡಿನಲ್ಲಿ ಕೆಲಸಮಾಡಿಕೊಂಡಿದ್ದು 1968 ಫೆಬ್ರುವರಿ 21ರಂದು ಕಾಲವಾದ ಫ್ಲೋರಿ ಕೊನೆಯತನಕವೂ ಬದಲಾಗದೆ, ತನ್ನ ಆಜನ್ಮ ಆಸ್ಟ್ರೇಲಿಯನ್ ಸ್ವಭಾವವನ್ನು ಉಳಿಸಿಕೊಂಡಿದ್ದ. ಅಲ್ಲದೆ ಮಾತೃಭೂಮಿಯ ಮಮತೆಯನ್ನು ಮರೆತಿರಲಿಲ್ಲ ಕೂಡ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ